ರಂಗವಲ್ಲಿ ಸದಾ ಹೊಸತನಕ್ಕೆ ಹಂಬಲಿಸುವ, ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುವ ಸಮಾನ ಮನಸ್ಕರ ತಂಡ. ೨೦೦೪ರಲ್ಲಿ ಮೈಸೂರು ರಂಗಾಯಣದ ರಂಗಶಿಕ್ಷಣ ಕೇಂದ್ರದಿಂದ ಸರ್ಟಿಫಿಕೇಟ್ ಕೋರ್ಸು ಪಡೆದು ಹೊರಬಂದ ಸಮಾನ ಮನಸ್ಕ ಸ್ನೇಹಿತರು ಹಾಗೂ ಹವ್ಯಾಸಿ ರಂಗಗೆಳೆಯರು ಸೇರಿ ಕಟ್ಟಿಕೊಂಡ ತಂಡ ರಂಗವಲ್ಲಿ. ೨೦೦೬ರಲ್ಲಿ ತಂಡದ ಸದಸ್ಯ ಬಿ.ಪಿ.ಅರುಣ್ ರಂಗರೂಪಕ್ಕೆ ಅಳವಡಿಸಿದ, ಎ.ಕೆ.ರಾಮಾನುಜನ್ ಅವರ ‘ಅಣ್ಣಯ್ಯನ ಮಾನವಶಾಸ್ತ್ರ’ ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಮಾಯಾಮೃಗ’ ಸಣ್ಣಕಥೆಗಳನ್ನು ಆಧರಿಸಿದ ನಾಟಕಗಳ ಮೂಲಕ ರಂಗಭೂಮಿಗೆ ಪಾದಾರ್ಪಣೆ.
ಕನ್ನಡ ಸಾಹಿತ್ಯದ ಮುಖ್ಯ ನಾಟಕಗಳು, ಸಣ್ಣಕತೆ, ಕಾದಂಬರಿ, ಅನುವಾದ ಕೃತಿಗಳನ್ನು ರಂಗಕ್ಕೆ ಅಳವಡಿಸುವ ದೃಷ್ಟಿಯಿಂದ ರಂಗವಲ್ಲಿ ತಂಡ ಕೆಲಸ ಮಾಡುತ್ತಿದೆ. ನಾಡಿನ ಹೆಸರಾಂತ ರಂಗ ನಿರ್ದೇಶಕರಾದ ಪ್ರಸನ್ನ, ಪ್ರಶಾಂತ್ ಹಿರೇಮಠ, ಸಿ.ಬಸವಲಿಂಗಯ್ಯ, ಪ್ರಭುಸ್ವಾಮಿ ಮಳಿಮಠ, ಜೀವನ್ಕುಮಾರ್ ಬಿ.ಹೆಗ್ಗೋಡು, ಎಂ.ಸಿ.ಕೃಷ್ಣಪ್ರಸಾದ್ ಮತ್ತು ಹೆಚ್.ಕೆ.ದ್ವಾರಕಾನಾಥ್, ಸಾಲಿಯಾನ್ ಉಮೇಶ್ ನಾರಾಯಣ ನಮ್ಮ ತಂಡಕ್ಕೆ ನಾಟಕಗಳನ್ನು ನಿರ್ದೇಶಿಸಿದ್ದರೆ, ತಂಡದ ಸದಸ್ಯರಾದ ಬಿ.ರಾಜೇಶ್, ರವಿಪ್ರಸಾದ್, ಮಹೇಶ್, ವಿಶ್ವಾಸ್ಕೃಷ್ಣ ನಾಟಕ ನಿರ್ದೇಶನ ಮಾಡಿದ್ದಾರೆ.
ರಂಗವಲ್ಲಿಯು ಕಳೆದ 18ವರ್ಷಗಳಲ್ಲಿ 18 ನಾಟಕಗಳು ಹಾಗೂ ಅಸಂಖ್ಯ ಮರುಪ್ರದರ್ಶನಗಳನ್ನು ನಿರಂತರವಾಗಿ ನೀಡುತ್ತ ಬಂದಿದೆ.