ನಮ್ಮ ಬಗ್ಗೆ
ರಂಗವಲ್ಲಿ, ಮೈಸೂರು
ರಂಗವಲ್ಲಿ ಸದಾ ಹೊಸತನಕ್ಕೆ ಹಂಬಲಿಸುವ, ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುವ ಸಮಾನ ಮನಸ್ಕರ ತಂಡ. ಕನ್ನಡ ಸಾಹಿತ್ಯದ ಮುಖ್ಯ ನಾಟಕಗಳು, ಸಣ್ಣಕತೆ, ಕಾದಂಬರಿ, ಅನುವಾದ ಕೃತಿಗಳನ್ನು ರಂಗಕ್ಕೆ ಅಳವಡಿಸುವ ದೃಷ್ಟಿಯಿಂದ ರಂಗವಲ್ಲಿ ತಂಡ ಕೆಲಸ ಮಾಡುತ್ತಿದೆ. ರಂಗವಲ್ಲಿಯು ಕಳೆದ 18ವರ್ಷಗಳಲ್ಲಿ 18 ನಾಟಕಗಳು ಹಾಗೂ ಅಸಂಖ್ಯ ಮರುಪ್ರದರ್ಶನಗಳನ್ನು ನಿರಂತರವಾಗಿ ನೀಡುತ್ತ ಬಂದಿದೆ.
ಆತ್ಮ ನಿರೀಕ್ಷಣೆ ರಂಗಭೂಮಿಯ ಗುರಿಗಳಲ್ಲಿ ಒಂದು. ತಿಳಿದವರು ಹೇಳಿರುವಂತೆ ಇದು ಸಮಾಜಕ್ಕೆ ಕನ್ನಡಿ. ಒಬ್ಬ ವ್ಯಕ್ತಿ ತನ್ನ ಆತ್ಮ ನಿರೀಕ್ಷಣೆಗಾಗಿ ಉಪಯೋಗಿಸಬಹುದಾದ ಅತ್ಯುತ್ತಮ ಸಾಧನ. ಇದನ್ನು ಉತ್ತಮವಾಗಿ ರೂಪಿಸಿ ಬಳಸಿಕೊಂಡಲ್ಲಿ, ನಮ್ಮ ಕಾವಲುಗಾರನ/ ಮಾರ್ಗದರ್ಶಕನ ರೀತಿಯಲ್ಲಿ ಕೆಲಸ ಮಾಡುತ್ತದೆ.
ಸೋಫೋಕ್ಲಿಸ್, ಷೇಕ್ಸ್ ಪಿಯರ್ ನನ್ನು ಹಾದು, ಆಧುನಿಕ ರಂಗಭೂಮಿಯವರೆಗೆ ನಾವು ಅನೇಕ ಮೈಲುಗಲ್ಲುಗಳನ್ನು ಕಂಡಿದ್ದೇವೆ. ಇದು ಸಾಧ್ಯವಾದದ್ದು , ಅವರ ಕತೆ, ನಾಟಕಗಳು ಸಾಮಾನ್ಯ ಜನರನ್ನು ತಲುಪಿದಾಗ. ಈಗಾಗಲೇ ಆನೇಕ ತಂಡಗಳು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಈ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿವೆ.
`ರಂಗವಲ್ಲಿ’, ಈ ಪರಂಪರೆಯನ್ನು ಮುಂದುವರೆಸುವ ಆಸೆ ಹೊತ್ತ ತಂಡ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಾಹಿತ್ಯವನ್ನು, ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ, ಚಿಂತನೆಯ ದೃಷ್ಟಿಯಿಂದ ಜನರಿಗೆ ತಲುಪಿಸುವ ಉದ್ದೇಶ ಹೊಂದಿದೆ. ತಂಡದ ಪ್ರತಿಯೊಬ್ಬ ಸದಸ್ಯನೂ ರಂಗಭೂಮಿಯ ಹಿರಿಯರ ಮಾರ್ಗದರ್ಶನದಲ್ಲಿ ಹಾಗು ದೇಶದ ಹೆಮ್ಮೆಯ ರೆಪರ್ಟರಿ ‘ರಂಗಾಯಣ’ ನಿರ್ದೇಶಕರಾಗಿದ್ದ ಪ್ರಸನ್ನ ಅವರ ಸಮಯದಲ್ಲಿ ಶುರುವಾದ ರಂಗ ಶಿಕ್ಷಣದಲ್ಲಿ ತರಬೇತಿ ಪಡೆದಿದ್ದಾರೆ.
2006ರಲ್ಲಿ ಎ.ಕೆ. ರಾಮಾನುಜನ್ ಅವರ ‘ಅಣ್ಣಯ್ಯನ ಮಾನವಶಾಸ್ತ್ರ’ ಮತ್ತು ಪೂರ್ಣ ಚಂದ್ರ ತೇಜಸ್ವಿ ಅವರ ‘ಮಾಯಾಮೃಗ’ ನಾಟಕದಿಂದ ಆರಂಭಗೊಂಡ ರಂಗವಲ್ಲಿಯ ರಂಗಭೂಮಿ ಪಯಣವು ಹೊಸ ರಂಗಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತ ನಾಡಿನ ಹಿರಿಯ ರಂಗಕರ್ಮಿಗಳು, ಹಿತೈಷಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.
ರಂಗವಲ್ಲಿಯ ಉದ್ದೇಶ
ನಮ್ಮ ತಂಡದ ಪ್ರಮುಖ ಪ್ರಯೋಗಗಳು
- ಎ.ಕೆ.ರಾಮಾನುಜನ್ ಅವರ ‘ಅಣ್ಣಯ್ಯನ ಮಾನವಶಾಸ್ತ್ರ’
- ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಮಾಯಾಮೃಗ’
- ನೊಬೆಲ್ ಪ್ರಶಸ್ತಿ ಪುರಸ್ಕೃತ ಜಾನ್ ಸ್ಟಿಯೆನ್‌ಬೆಕ್‌ನ ‘ಆಫ್ ಮೈಸ್ ಅಂಡ್ ಮೆನ್’ ಆಧಾರಿತ ‘ಇಂವ ಇಲೀನಾ ಮನುಷ್ಯನಾ’
- ಪಿ.ಲಂಕೇಶರ ‘ಪೊಲೀಸರಿದ್ದಾರೆ ಎಚ್ಚರಿಕೆ’
- ಆರ್ಯ ಆಚಾರ್ಯ ಅವರ ‘ಅನೀಶ್-ಶೀಲ’
- ಎಸ್.ಎನ್.ಕಿತ್ತೂರರ ‘ಮಧ್ಯರಾತ್ರಿಯ ತಿಗಣೆಗಳು’
- ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್‍ನ ‘ಈ ಊರಿನಲ್ಲಿ ಕಳ್ಳರೇ ಇಲ್ಲ’
- ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’
- ಕೆ.ವಿ.ಅಕ್ಷರ ಅವರ ‘ಸಂಸಾರದಲ್ಲಿ ಸನಿದಪ’
- ಮಾಯಸಂದ್ರ ಕೃಷ್ಣಪ್ರಸಾದ್ ಅವರ ‘ತಟ್ಟೆ ಇಡ್ಲಿ ರಾದ್ಧಾಂತ’
- ಜಯಂತ್ ಕಾಯ್ಕಿಣಿ ಕತೆ ಆಧಾರಿತ ‘ಮಿಥುನ್ ನಂಬರ್ ಟೂ’
- ಮಹಾತ್ಮ ಗಾಂಧೀಜೀಯವರ ಹಿಂದ್-ಸ್ವರಾಜ್ ಕೃತಿ ಆಧಾರಿತ ‘ಸ್ವರಾಜ್ಯದಾಟ’
- ಶ್ರೀನಿವಾಸ ವೈದ್ಯರ ಬರಹಗಳನ್ನಾಧರಿಸಿದ ‘ಪಾರ್ಶ್ವಸಂಗೀತ’
- ಫ್ರೆಡರಿಕ್ ನಾಟ್‌ನ ‘ಬ್ಲೈಂಡ್‍ಶಾಟ್’
- ಷೇಕ್ಸ್‍ಪಿಯರ್ ಮಹಾಕವಿಯ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’
- ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ ಕಾರ್ನಾಡರ ‘ತುಘಲಕ್’
- ಪ್ರಸನ್ನ ಅವರ ‘ಒಳಶುಂಠಿ’
- ಭಾಸ ಮಹಾಕವಿಯ ‘ಪ್ರತಿಜ್ಞಾ ಮತ್ತು ಸ್ವಪ್ನ ನಾಟಕ’